ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಉದ್ಯಮ ಕ್ಷೇತ್ರದ ಸಂಕಷ್ಟ

Last Updated 23 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಆಗ ನ್ಯಾನೊ ಹೋಯ್ತು.
ಈಗ ಹೀರೊ ಸರದಿ. ಮುಂದೆ...?
ಉತ್ತರ ಕರ್ನಾಟಕ ಭಾಗದ ಆರ್ಥಿಕ– ಸಾಮಾಜಿಕ ಅಭಿವೃದ್ಧಿಯಲ್ಲಿ ಹೊಸ ಶಕೆಗೆ ಕಾರಣವಾಗಬಹುದೆಂಬ ನಿರೀಕ್ಷೆ ಹುಟ್ಟಿಸಿ, ಅಷ್ಟರಲ್ಲೇ ಇನ್ನೊಂದು ರಾಜ್ಯದ ಪಾಲಾಗುತ್ತಿರುವ ಬೃಹತ್‌ ಕೈಗಾರಿಕೆಗಳನ್ನು ಕಂಡು ನಿರಾಶೆಗೊಳಗಾದ ಸಾವಿರಾರು ಉದ್ಯೋಗಾಕಾಂಕ್ಷಿಗಳ, ನೂರಾರು ಸಣ್ಣ ಕೈಗಾರಿಕೋದ್ಯಮಿಗಳ ಮುಂದೆ ಧುತ್ತನೆ ಬಂದು ನಿಲ್ಲುವ ಪ್ರಶ್ನೆ ಇದು!

ಈ ಹಿಂದೆ, ಟಾಟಾ ನ್ಯಾನೊ ಘಟಕ ಸ್ಥಾಪನೆಯಾಗುವ ಸುದ್ದಿ ಈ ಭಾಗದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಆದರೆ, ನರೇಂದ್ರ ಮೋದಿ ಅವರ ಮೋಡಿಗೊಳಗಾದ ನ್ಯಾನೊ ಘಟಕ ಗುಜರಾತ್‌ ಪಾಲಾಯಿತು. ಈಗ ಹೀರೊ ಮೋಟೊ ಕಾರ್ಪ್‌ ಸರದಿ.  2,200 ಕೋಟಿ ಬಂಡವಾಳ ಹೂಡಿಕೆಯ ಹೀರೊ ಮೋಟೊ ಕಾರ್ಪ್‌ನ ವಾರ್ಷಿಕ 18 ಲಕ್ಷ ದ್ವಿಚಕ್ರ ವಾಹನ ತಯಾರಿಕೆ ಸಾಮರ್ಥ್ಯದ ಉದ್ಯಮ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಗೆ ತೆರಳಿದೆ.

ಹೀರೊ ದ್ವಿಚಕ್ರ ಉತ್ಪಾದನಾ ಘಟಕ ಸ್ಥಾಪನೆ ವಿಷಯದಲ್ಲಿ ಈ ಭಾಗದ ಉದ್ಯಮಿಗಳು ಕಾತರರಾಗಿದ್ದರು; ಉದ್ಯೋಗಾಕಾಂಕ್ಷಿಗಳ ಮುಖದಲ್ಲಿ ನಿರೀಕ್ಷೆಯ ಚಿತ್ತಾರ ಮೂಡಿತ್ತು. ಸಣ್ಣ ಕೈಗಾರಿಕೋದ್ಯಮಿಗಳಲ್ಲಂತೂ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಯ ಜೊತೆಗೆ ಉದ್ಯಮ ಕ್ಷೇತ್ರದಲ್ಲಿ ಹೊಸ ಮನ್ವಂತರದ ವಿಶ್ವಾಸ ಮೂಡಿತ್ತು. ಆದರೆ, ಹೀರೊ ಹೊಸತಾಗಿ ಅಸ್ತಿತ್ವಕ್ಕೆ ಬಂದ ‘ಸೀಮಾಂಧ್ರ’ (ಆಂಧ್ರ ಪ್ರದೇಶ) ರಾಜ್ಯದ ಪಾಲಾಗುವ ಮೂಲಕ ಉತ್ತರ ಕರ್ನಾಟಕದ ಉದ್ಯಮ ವಲಯದ ಪಾಲಿಗೆ ಆಕಾಶವೇ ಕಳಚಿಬಿದ್ದಂತಾಗಿದೆ.

ಅದಕ್ಕೆ ಕಾರಣವೂ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿ ವರ್ಷ ಅಂದಾಜು 8 ಸಾವಿರದಿಂದ 10 ಸಾವಿರ ಎಂಜಿನಿಯರಿಂಗ್‌, 14 ಸಾವಿರ ಡಿಪ್ಲೊಮಾ ಪದವೀಧರರು ಸೃಷ್ಟಿಯಾಗುತ್ತಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆ ಇಲ್ಲದ ಕಾರಣಕ್ಕೆ ಉದ್ಯೋಗಾಂಕ್ಷಿಗಳು ಬೆಂಗಳೂರು, ಮುಂಬೈ ಕಡೆಗೆ ವಲಸೆ ಹೋಗುತ್ತಾರೆ. ಮುಂಬೈ ಮತ್ತು ಬೆಂಗಳೂರಿನ ಎಂಜಿನಿಯರ್‌ಗಳು ಅಮೆರಿಕಾ, ಜರ್ಮನಿ, ಇಂಗ್ಲೆಂಡ್‌ ಮತ್ತಿತರ ವಿದೇಶ ರಾಷ್ಟ್ರಗಳಿಗೆ ಹಾರುತ್ತಾರೆ. ಪರಿವರ್ತನೆಯ ಕಾಲಘಟ್ಟದಲ್ಲಿ ಇದು ಅನಿವಾರ್ಯ ಪ್ರಕ್ರಿಯೆ. ನ್ಯಾನ್ಯೋ, ಹೀರೊ ಮೋಟೊ ಕಾರ್ಪ್‌ನಂತಹ ದೈತ್ಯ ಕಂಪೆನಿಗಳ ಘಟಕ ಸ್ಥಾಪನೆಯಿಂದ ಈ ಭಾಗದ ಪ್ರತಿಭಾ ಪಲಯನಕ್ಕೆ ತಡೆ ಒಡ್ಡಬಹುದಿತ್ತು. ಉದ್ಯೋಗ ಅರಸಿ ಲೋಕಸುತ್ತುವುದನ್ನು ತಪ್ಪಿಸಬಹುದಿತ್ತು. ಅಷ್ಟೇ ಅಲ್ಲ, ಅಭಿವೃದ್ಧಿ ಗತಿಯನ್ನೇ ಬದಲಾಯಿಸಬಹುದಿತ್ತು ಎನ್ನುವುದು ಸ್ಥಳೀಯ ಉದ್ಯಮಿಗಳ ಅಭಿಮತ.

‘ಬೃಹತ್‌ ಕಂಪೆನಿಗಳ ಸ್ಥಾಪನೆಯಿಂದ ಉದ್ಯೋಗ ಸೃಷ್ಟಿಯೊಂದೇ ಲಾಭವಲ್ಲ, ಇನ್ನಷ್ಟು ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ಉದ್ಯೋಗ ಸೃಜಿಸುವ ಜೊತೆಗೆ ಸಾಕಷ್ಟು ಪರೋಕ್ಷ ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ತೆರಿಗೆ ಸಂಗ್ರಹ ಮೂಲಕ ಸರ್ಕಾರಕ್ಕೆ ಕೋಟ್ಯಂತರ ಆದಾಯ ಬರುತ್ತದೆ. ಈ ದೃಷ್ಟಿಯಲ್ಲಿ ಗಮನಿಸಿದರೆ, ಈ ಭಾಗದಿಂದ ಆರಿಸಿ ಬಂದು ಮುಖ್ಯಮಂತ್ರಿ ಗದ್ದುಗೆ ಏರಿದ್ದ ವೀರೇಂದ್ರ ಪಾಟೀಲ್‌, ಎಸ್.ಆರ್.ಬೊಮ್ಮಾಯಿ, ಜಗದೀಶ ಶೆಟ್ಟರ್‌ ಅವರಿಂದ ಉತ್ತರ ಕರ್ನಾಟಕಕ್ಕೆ ನಿರೀಕ್ಷಿತ ನ್ಯಾಯ ಸಿಕ್ಕಿಲ್ಲ. ಬೊಮ್ಮಾಯಿ ಮತ್ತು ಶೆಟ್ಟರ್‌ ಹುಬ್ಬಳ್ಳಿಯವರೇ ಆಗಿದ್ದರೂ ಅವಳಿ ನಗರದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಷ್ಟಕ್ಕಷ್ಟೆ. ವಿರೋಧ ಪಕ್ಷದಲ್ಲಿದ್ದಾಗ ಅವಳಿ ನಗರಕ್ಕೆ ಸಲ್ಲಬೇಕಾದ ಸವಲತ್ತುಗಳ ಕುರಿತು ಕಾಳಜಿ ತೋರಿಸುವ ಶೆಟ್ಟರ್‌, ತಾವು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಕೊಡುಗೆ ನಗಣ್ಯ ಎನ್ನುವುದು ಕಣ್ಣಿಗೆ ಕಾಣುವ ಸತ್ಯ’ ಎನ್ನುವುದು ಹಿರಿಯ ಉದ್ಯಮಿಯೊಬ್ಬರ ಅಸಮಾಧಾನದ ನುಡಿ.

ಹೀರೊ ಮೋಟೊ ಕಾರ್ಪ್ ಘಟಕವನ್ನು ಧಾರವಾಡದ ಮಮ್ಮಿಗಟ್ಟಿಗೆ ತರಬೇಕು ಎಂದು ಶತಾಯಗತಾಯ ಪ್ರಯತ್ನಿಸಿದವರು ಹುಬ್ಬಳ್ಳಿ– ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ. ಈ ಭಾಗದಲ್ಲಿ ‘ಹೀರೊ’ ದ್ವಿ ಚಕ್ರ ವಾಹನಗಳ ಶೋ ರೂಂ ಹೊಂದಿರುವ ಉದ್ಯಮಿ ಬೆಲ್ಲದ, ಕಂಪೆನಿಯ ಮುಖ್ಯಸ್ಥರ ಜೊತೆ ನಿಕಟ ಸಂಪರ್ಕದಲ್ಲಿದ್ದು, ಘಟಕ ಸ್ಥಾಪನೆಗಾಗಿ ರಾಜ್ಯ ಸರ್ಕಾರದ ಹಿಂದೆ ಬಿದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ಈ ನಿಟ್ಟಿನಲ್ಲಿ ಈ ಭಾಗದ ಸಚಿವರು, ಶಾಸಕರು ‘ರಾಜಕೀಯ’ ಮಾಡಿದರೇ ಹೊರತು ಪರವಾಗಿ ತುಟಿ ಬಿಚ್ಚಲಿಲ್ಲ. ಸ್ವಪಕ್ಷೀಯರೂ ಬೆಲ್ಲದ ಅವರಿಗೆ ಸಾಥ್‌ ನೀಡಲಿಲ್ಲ. ಬೃಹತ್‌ ಮತ್ತು ಮಹತ್ವದ ಉದ್ಯಮವೊಂದು ತಮ್ಮ ಭಾಗಕ್ಕೆ ಬರುವುದರಿಂದ ಆಗುವ ಲಾಭ, ಈ ಪ್ರದೇಶದ ಆರ್ಥಿಕಾಭಿವೃದ್ಧಿ ಮೇಲಾಗುವ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವನ್ನು ಸ್ಥಳೀಯ ಜನಪ್ರತಿನಿಧಿಗಳು ಮಾಡಿಲ್ಲ ಎನ್ನುವ ಆರೋಪ ಇಲ್ಲಿನವರದ್ದು.‌

ವಾಸ್ತವ- ಅವಕಾಶ
ಸರ್ಕಾರ ಜಾಗ ನೀಡುವ ಜೊತೆಗೆ ಸೌಲಭ್ಯ ಒದಗಿಸುವ ವಾಗ್ದಾನ ನೀಡಿದ್ದರೂ ಹೀರೊ ಕಂಪೆನಿ ಆಂಧ್ರಪ್ರದೇಶಕ್ಕೆ ಮುಖ ಮಾಡಿದೆ. ಸರ್ಕಾರ ತನ್ನ ನಿರ್ಧಾರವನ್ನು ಹೀರೊ ಕಂಪೆನಿಗೆ ತಿಳಿಸಲು ವಿಳಂಬ ಮಾಡಿದ್ದು, ಕಂಪೆನಿ ಬೇರೆ ರಾಜ್ಯದ ಪಾಲಾಗಲು ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣುವ ವಾಸ್ತವ. ಈ ಅವಕಾಶವನ್ನು ಬಳಸಿಕೊಂಡ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಂಪೆನಿ ಕೇಳಿದ ಎಲ್ಲ ಸವಲತ್ತುಗಳಿಗೆ ಸಹಮತ ನೀಡಿ ಚಿತ್ತೂರಿನಲ್ಲಿ ಜಮೀನು ನೀಡಲು ಒಪ್ಪಿದ್ದರಿಂದ ಹೀರೊ ರಾಜ್ಯದ ಕೈತಪ್ಪಿದೆ.

‘ನಾವು ಉದ್ಯಮಿಗಳು. ಯಾರು ನಮಗೆ ಹೆಚ್ಚು ಸೌಲಭ್ಯಗಳನ್ನು ಒದಗಿಸುತ್ತಾರೋ ಅಲ್ಲಿಗೆ ಹೋಗುತ್ತೇವೆ ಎಂದು ಹೇಳಿಕೊಳ್ಳುತ್ತಲೇ ಬಂದಿದ್ದ ಹೀರೊ ಮೋಟೊ ಕಾರ್ಪ್‌ ಕಂಪೆನಿಯ ಮುಖ್ಯಸ್ಥರು, ಘಟಕ ಎಲ್ಲಿ ಸ್ಥಾಪಿಸಬೇಕೆಂಬ ಕುರಿತ ನಿರ್ಧಾರವನ್ನು ಮುಕ್ತವಾಗಿ ಇರಿಸಿದ್ದರು. ಹೀಗಾಗಿ, ಅವರು ಆಂಧ್ರಪ್ರದೇಶದ ಚಿತ್ತೂರಿಗೆ ಮುಖ ಮಾಡಿರುವುದರಲ್ಲಿ ಅಚ್ಚರಿಪಡುವಂತಹದ್ದು ಏನೂ ಇಲ್ಲ’ ಎನ್ನುತ್ತಾರೆ ಹೀರೊ ಕಂಪೆನಿಯ ಪ್ರತಿನಿಧಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದು, ಧಾರವಾಡದಲ್ಲಿ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಓಡಾಡುತ್ತಿದ್ದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.

ಹೀರೊ ಮೋಟೊ ಕಾರ್ಪ್‌ ಕಂಪೆನಿಗೆ ಘಟಕ ಸ್ಥಾಪಿಸಲು 500 ಎಕರೆ ಜಾಗ ಮಂಜೂರು ಮತ್ತು ಎಲ್ಲ ಸೌಲಭ್ಯಗಳನ್ನು ಒದಗಿಸುವ ಕುರಿತ ಮಾತುಕತೆ ನಡೆಸಲಾಗಿತ್ತು. ಆದರೆ, ಕಂಪೆನಿಯ ಮುಖ್ಯಸ್ಥರು ಸರ್ಕಾರದ ಮುಂದಿಟ್ಟಿದ್ದ ಕೆಲವು ಬೇಡಿಕೆಗಳು ಒಪ್ಪುವಂತಿರಲಿಲ್ಲ. ಆದರೆ ಹೊಸತಾಗಿ ಅಸ್ತಿತ್ವಕ್ಕೆ ಬಂದ ಸೀಮಾಂಧ್ರ (ಆಂಧ್ರ ಪ್ರದೇಶ) ರಾಜ್ಯಕ್ಕೆ ಮೂಲಸೌಲಭ್ಯಗಳ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನ ಹರಿದು ಬರಲಿದೆ. ಅದಕ್ಕೆ ಪೂರಕವಾಗಿ, ಚಾಣಾಕ್ಷತನ ಪ್ರದರ್ಶಿಸಿದ ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಂಪೆನಿಯ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಾರೆ. ನಾಯ್ಡು ಅಲ್ಲದೆ, ಬೇರೆ ಯಾರೇ ಆದರೂ ಕಂಪೆನಿಯ ಬೇಡಿಕೆಗಳನ್ನು ಅಷ್ಟು ಸುಲಭದಲ್ಲಿ ಒಪ್ಪುತ್ತಿರಲಿಲ್ಲ. ಲಾಭದ ಲೆಕ್ಕಾಚಾರ ಇಟ್ಟು ಆ ಕಂಪೆನಿ ರಾಜ್ಯದಿಂದ ದೂರವಾಗಿದೆ’ ಎನ್ನುವ ಪ್ರತಿಪಾದನೆ ಅಧಿಕಾರಿಯದ್ದು.

ಧಾರವಾಡದಲ್ಲಿ ಟಾಟಾ ಮಾರ್ಕೊ ಪೋಲೊ ಕಂಪೆನಿಯ ಘಟಕ ಆರಂಭಗೊಂಡಾಗ ದೇಶದ ಬೇರೆಲ್ಲೂ ಆ ಕಂಪೆನಿಯ ಘಟಕ ಇರಲಿಲ್ಲ. ಹೀಗಾಗಿ ಆ ಕಂಪೆನಿ ಏನೇ ವ್ಯವಹಾರ ಮಾಡಿದರೂ ರಾಜ್ಯಕ್ಕೆ ಹೆಚ್ಚುವರಿ ಆದಾಯ ಬರುತ್ತಿತ್ತು. ಆದರೆ ಹೀರೊ ಮೋಟೊ ಕಾರ್ಪ್‌ ಕಂಪೆನಿಯ ವಿಷಯದಲ್ಲಿ ಅದೇ ರೀತಿಯ ನಿಲುವು ತೆಗೆದುಕೊಳ್ಳಲು ಅವಕಾಶ ಇರಲಿಲ್ಲ. ರಾಜ್ಯದಲ್ಲಿ ಈಗಾಗಲೇ ಹೀರೊ ದ್ವಿಚಕ್ರ ವಾಹನಗಳು ಓಡಾಡುತ್ತಿವೆ. ಹೀಗಾಗಿ ದ್ವಿಚಕ್ರ ವಾಹನಗಳ ಮಾರುಕಟ್ಟೆ ದೃಷ್ಟಿಯಿಂದ ರಾಜ್ಯ ಹೆಚ್ಚಿನ ಪ್ರಮಾಣದ ತೆರಿಗೆ ನಿರೀಕ್ಷಿಸುವಂತಿರಲಿಲ್ಲ. ಈ ಕಾರಣಕ್ಕೆ ಮತ್ತು ಉದ್ಯೋಗ ಸೃಷ್ಟಿ ಒಂದೇ ವಿಷಯವನ್ನು ಮುಂದಿಟ್ಟು ಆ ಕಂಪೆನಿಯ ಎಲ್ಲ ಬೇಡಿಕೆಗಳಿಗೆ ಸಹಮತ ಸೂಚಿಸಲು ಸಾಧ್ಯ ಇರಲಿಲ್ಲ. ಹುಬ್ಬಳ್ಳಿ– ಧಾರವಾಡ, ಬೆಳಗಾವಿಗೆ ಹೊಂದಿಕೊಂಡಂತೆ ಸರ್ಕಾರದ 900 ಎಕರೆ ಜಾಗ ಕೈಗಾರಿಕೆಗೆ ಮೀಸಲಿದೆ. ಹೀರೊ ಕೈತಪ್ಪಿದ ಕಾರಣಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಬೃಹತ್‌ ಕಂಪೆನಿಗಳು ಬರಲು ಹಿಂದೇಟು ಹಾಕಬಹುದೆಂದು ಆತಂಕಪಡುವ ಅಗತ್ಯ ಇಲ್ಲ’ ಎನ್ನುವ ಆಶಾಭಾವ ಈ ಹಿರಿಯ ಅಧಿಕಾರಿಯದು!

ರಾಷ್ಟ್ರೀಯ ಹೆದ್ದಾರಿ, ಸಮರ್ಪಕ ರೈಲ್ವೆ ಸಂಪರ್ಕ, ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣ ಇವೆಲ್ಲವುಗಳ ಜತೆಗೆ ಕೈಗಾರಿಕೆಗೆ ಅಗತ್ಯವಿರುವ ಜಾಗ ಇರುವುದರಿಂದ ಧಾರವಾಡ ಪ್ರಮುಖ ಕೈಗಾರಿಕಾ ವಲಯವಾಗಿ ರೂಪುಗೊಳ್ಳುವ ಎಲ್ಲ ಅರ್ಹತೆಗಳನ್ನೂ ಹೊಂದಿದೆ. ಬೆಂಗಳೂರು–-ಪುಣೆ ಮಧ್ಯದ ಸ್ಥಳವಾಗಿರುವ ಇಲ್ಲಿನ ಹವಾಗುಣವೂ ಕೈಗಾರಿಕೆಗಳಿಗೆ ಪೂರಕವಾಗಿದೆ. ಅಗತ್ಯ ಮಾನವ ಸಂಪನ್ಮೂಲವೂ ಹೇರಳವಾಗಿದೆ. ಅಧ್ಯಯನವೊಂದರ ವರದಿಯಂತೆ ಒಂದು ಎಂಜಿನಿಯರ್‌ ಉದ್ಯೋಗಕ್ಕೆ ಪೂರಕವಾಗಿ ಟೈಲರ್, ಆಟೊ ರಿಕ್ಷಾವಾಲಾ.. ಹೀಗೆ ಎಂಟು ಪರೋಕ್ಷ ಉದ್ಯೋಗ ಸೃಷ್ಟಿಯಾಗುತ್ತದೆ. ಆದರೂ, ಉತ್ತರ ಕರ್ನಾಟಕಕ್ಕೆ ಕೈಗಾರಿಕೆಗಳು ಬರಲು ಹಿಂದೇಟು ಹಾಕಲು ಸರ್ಕಾರದ ಕೈಗಾರಿಕಾ ನೀತಿ ಕಾರಣ ಎಂಬುವುದು ಇಲ್ಲಿನ ಕೈಗಾರಿಕೋದ್ಯಮಿಗಳ ಒಕ್ಕೊರಲ ಅನಿಸಿಕೆ.

‘ಉತ್ತರ ಕರ್ನಾಟಕಕ್ಕೆ ಅನ್ಯಾಯ’
ರಾಜ್ಯ ಸರ್ಕಾರ ಈಗಾಗಲೇ ಘೋಷಿಸಿರುವ ಎಲ್ಲ ವಿನಾಯಿತಿ ಹಾಗೂ ಸವಲತ್ತುಗಳನ್ನು ಹೀರೊ ಮೋಟೊ ಕಾರ್ಪ್, ಆಂಧ್ರಪ್ರದೇಶ ಸರ್ಕಾರದ ಮುಂದಿಟ್ಟು, ನಮ್ಮ ಸರ್ಕಾರ ನೀಡುವುದಕ್ಕಿಂತ ಹೆಚ್ಚಿನದನ್ನು ಗಿಟ್ಟಿಸಿಕೊಂಡು ಚಿತ್ತೂರು ಜಿಲ್ಲೆಯ ವಿಶೇಷ ಆರ್ಥಿಕ ವಲಯದಲ್ಲಿ ಜಾಗ ಪಡೆದುಕೊಂಡಿದೆ. ಇದರಿಂದ ಚಿತ್ತೂರಿನಷ್ಟೇ ಅನುಕೂಲಕರ ಜಾಗ ಮತ್ತು ಸವಲತ್ತು ಕೊಡುವ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
ವಸಂತ ಲದವಾ, ಕೆಸಿಸಿಐ ಅಧ್ಯಕ್ಷ


‘ಅನಾಥ ಶ್ರೀಮಂತ ಶಿಶು’
ದೇಶದ ಪ್ರಮುಖ ಕೈಗಾರಿಕಾ ಕೇಂದ್ರವಾಗುವ ಎಲ್ಲ ಅರ್ಹತೆಯನ್ನು ಧಾರವಾಡ ಹೊಂದಿದ್ದರೂ ಇಲ್ಲಿ ಅಗತ್ಯ ಮೂಲಸೌಕರ್ಯ ಒದಗಿಸಲು, ಪ್ರಮುಖ ಕೈಗಾರಿಕೆಗಳನ್ನು ಸ್ಥಾಪಿಸಲು ಒಪ್ಪಿಗೆ ನೀಡುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ. ಇದರಿಂದ ಉತ್ತರ ಕರ್ನಾಟಕ ಹಿಂದುಳಿದಿದೆ. ಇಲ್ಲಿನ ಬಹಳಷ್ಟು ಮಾನವ ಸಂಪನ್ಮೂಲ ಹೊರ ರಾಜ್ಯ– ದೇಶಗಳಲ್ಲಿ ದುಡಿಯುತ್ತಿದ್ದು, ಇಲ್ಲಿ ಕೈಗಾರಿಕೆ ಸ್ಥಾಪನೆಯಾದರೆ, ಸ್ಥಳೀಯ ಸಾವಿರಾರು ಪ್ರತಿಭಾನ್ವಿತರಿಗೆ ಅವಕಾಶ ದೊರೆಯುತ್ತದೆ.

ಚಕ್ಕಡಿಗಳಲ್ಲಿ ಜನ ಓಡಾಡುತ್ತಿದ್ದ ದಿನಗಳಲ್ಲಿ ಹತ್ತಿ, ಟೆಕ್ಸ್‌ಟೈಲ್‌ ಉದ್ಯಮಗಳ ಮೂಲಕ ಇಂಗ್ಲೆಡ್‌ನ ಮ್ಯಾಂಚೆಸ್ಟರ್‌ಗೆ ವ್ಯಾಪಾರ– ವಹಿವಾಟು ವಿಸ್ತರಿಸಿಕೊಂಡಿದ್ದ ಉತ್ತರ ಕರ್ನಾಟಕ, ಇಂದು ಕೈಗಾರಿಕಾ ಕ್ಷೇತ್ರದ ಬೆಳವಣಿಗೆಯಲ್ಲಿ ಹಿಂದುಳಿಯಲು ಕಾರಣಗಳು ಹಲವು ಇದೆ. ಹಾಗೆ ನೋಡಿದರೆ, ಈ ಭಾಗದ ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ನೆಲದ ಗುಣ– ಸತ್ವ ಕಾರಣವೇ ಹೊರತು ಯಾರೊಬ್ಬರ ಔದಾರ್ಯವೂ ಅಲ್ಲ. ಹುಬ್ಬಳ್ಳಿ– ಧಾರವಾಡ ಕೇಂದ್ರೀಕರಿಸಿಕೊಂಡು ಉತ್ತರ ಕರ್ನಾಟಕ ಸ್ವಂತ ಶಕ್ತಿಯಿಂದ ಬೆಳೆದಿದೆ. ಆ ಕಾರಣಕ್ಕೆ ಇದು ಆಗರ್ಭ ಶ್ರೀಮಂತವೆನಿಸಿದರೂ ಅನಾಥ ಶಿಶು. ಈ ಭಾಗದಲ್ಲಿರುವ ಸಾಕಷ್ಟು ಪಾಲಿಟೆಕ್ನಿಕ್‌, ಡಿಪ್ಲೊಮಾ, ಎಂಜಿನಿಯರಿಂಗ್‌, ಆಡಳಿತ ನಿರ್ವಹಣೆ ಮತ್ತಿತರ ಸಂಸ್ಥೆಗಳಿಂದ ಕೌಶಲ ಪಡೆದು ಹೊರಬರುವ ಯುವಸಮೂಹದ ವಲಸೆ ತಡೆದು ಸ್ಥಳೀಯವಾಗಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಆಗಬೇಕು. ಅದಕ್ಕೆ ಪೂರಕವಾಗಿ ಜನಪ್ರತಿನಿಧಿಗಳು ಸ್ಪಂದಿಸಬೇಕು.     
ಮದನ ದೇಸಾಯಿ,ಹಿರಿಯ ಉದ್ಯಮಿ

‘ವಿಶೇಷ ಕೈಗಾರಿಕಾ ನೀತಿಯೊಂದೇ ಪರಿಹಾರ’

ನ್ಯಾನೊ, ಹೀರೊ... ಈ ಎರಡೂ ಯೋಜನೆಗಳು ಉತ್ತರ ಕರ್ನಾಟಕ ಭಾಗದಲ್ಲಿ ಹೊಸ ಆಶಾಭಾವ ಹುಟ್ಟಿಸಿದ್ದವು. ಕೈಗಾರಿಕಾ ಕ್ಷೇತ್ರದ ಬೆಳವಣಿಗೆ ಜತೆಗೇ ಸಾಮಾಜಿಕ– ಆರ್ಥಿಕ ಪ್ರಗತಿಗೆ ಇದರಿಂದ  ಅನುಕೂಲವಾಗುವ ನಿರೀಕ್ಷೆ ಇತ್ತು. ಈ ಭಾಗದ ದುರದೃಷ್ಟ ಹಾಗಾಗ ಲಿಲ್ಲ. ನನ್ನ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗೆ ಉತ್ತೇಜನ ಮತ್ತು ಅಭಿವೃದ್ಧಿ ಯನ್ನು ದೃಷ್ಟಿಯಲ್ಲಿಟ್ಟು ‘ವಿಶೇಷ ಕೈಗಾರಿಕಾ ನೀತಿ’ ರೂಪಿಸುವ ಅಗತ್ಯವಿದೆ. ಕಂಪೆನಿಯ ಬಂಡವಾಳ ಹೂಡಿಕೆ, ಸೃಷ್ಟಿಸಬಹುದಾದ ಉದ್ಯೋಗಕ್ಕೆ ಅನುಗುಣವಾಗಿ ಇಂತಹ ದ್ದೊಂದು ನೀತಿ ರೂಪಿಸಿ ಅನುಷ್ಠಾನಗೊಳಿಸಿದರೆ ಕೈಗಾರಿಕೆಗಳನ್ನು ಆರ್ಕಷಿಸಬಹುದು. ಕಂಪೆನಿ ಬಂದ ಬಳಿಕ, ನೀಡಬಹುದಾದ ಸೌಲಭ್ಯ, ರಿಯಾಯಿತಿ ಸಂಬಂಧಪಟ್ಟಂತೆ ಯೋಜನೆ ಮಾಡಿ ಕಡತಗಳು ವಿಲೇವಾರಿಯಾಗು ವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದೆ. ಅಷ್ಟರೊಳಗೆ ಇನ್ನೊಂದು ರಾಜ್ಯ ಆ ಕಂಪೆನಿಯನ್ನು ಸೆಳೆದುಕೊಳ್ಳುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಸ್ಪಷ್ಟತೆ ಬೇಕು. ‘ಪಾಲಿಸಿ ಡಾಕ್ಯುಮೆಂಟ್‌’ ಇರಬೇಕು. ಆಗ ಮಾತ್ರ ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ’.

ಅಶೋಕ ಶೆಟ್ಟರ್‌,  ಪ್ರಾಂಶುಪಾಲರು, ಬಿವಿಬಿ ಎಂಜಿನಿಯಂರಿಗ್ ಕಾಲೇಜು

‘ದೂರಗಾಮಿ ಲಾಭ, ಪ್ರಯೋಜನ’

‘ಈಗಾಗಲೇ ಘಟಕದ ಸ್ಥಾಪಿಸಿರುವ ಟಾಟಾ ಮಾರ್ಕೋ ಪೋಲೊ, ಟಾಟಾ ಮೋಟಾರ್ಸ್‌ ಸಾಕಷ್ಟು ಮಂದಿಗೆ ಉದ್ಯೋಗ ನೀಡಿದೆ. ನ್ಯಾನೊ, ಹೀರೊ ಕಂಪೆನಿಯ ಘಟಕಗಳು ಸ್ಥಾಪನೆಯಾಗುತ್ತಿದ್ದರೆ ಈ ಅವಕಾಶ ಇನ್ನೂ 10 ಪಟ್ಟು ಹೆಚ್ಚುತ್ತಿತ್ತು. ಬೆಳಗಾವಿ, ಕೊಲ್ಲಾಪುರ, ಮಹಾರಾಷ್ಟ್ರ ಜೊತೆಗಿನ ನಂಟು ಬೆಸೆದು ಧಾರವಾಡ ಬೇಲೂರು ಕೈಗಾರಿಕಾ ಪ್ರಾಂಗಣಕ್ಕೆ ಇನ್ನಷ್ಟು ಅನುಕೂಲ ಆಗುತ್ತಿತ್ತು.

ಕೈಗಾರಿಕೆಗಳಿಂದ ಯಾವುದೇ ಭಾಗದ ಆರ್ಥಿಕತೆಯ ಸ್ವರೂಪ ಬದಲಾಗುತ್ತದೆ. ಸಾವಿರಾರು ಕೋಟಿ ಹಣ ಹರಿದು ಬರುವುದರಿಂದ ಪ್ರವಾಸೋದ್ಯಮ, ಹೋಟೆಲ್‌ ವಲಯಕ್ಕೆ ಲಾಭ ಆಗುತ್ತದೆ. ಮಾರುಕಟ್ಟೆ ಇನ್ನಷ್ಟು ವಿಸ್ತರಣೆಯಾಗುತ್ತದೆ, ಆದಾಯ ದ್ವಿಗುಣಗೊಳ್ಳುತ್ತದೆ. ಹೀಗಾಗಿ, ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಹತ್ತಾರು ಕೋಟಿ ಖರ್ಚು ಮಾಡುವುದರಿಂದ ಭವಿಷ್ಯದಲ್ಲಿ, ದೂರಗಾಮಿ ಲಾಭ, ಪ್ರಯೋಜನ ಸಿಕ್ಕೇ ಸಿಗುತ್ತದೆ. ಈ ನಿಟ್ಟಿನಲ್ಲಿ ದೂರದೃಷ್ಟಿ ಅಗತ್ಯ.
ಅಶೋಕ್‌ ಎಚ್‌.ಚಚಡಿ, ಆರ್ಥಿಕ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT