ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಶ್ಯಾವೃತ್ತಿ: ಸಮಾಜದ ದೃಷ್ಟಿ ಬದಲಾಗಲಿ

ಚರ್ಚೆ
Last Updated 24 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕವಿ ಕೆ.ಎಸ್. ನಿಸಾರ್‌ ಅಹಮದ್ ಅವರು ವೇಶ್ಯಾ­ವೃತ್ತಿಗೆ ಕಾನೂನಿನ ಮಾನ್ಯತೆ ಸಿಗ­ಬೇಕೆ­ನ್ನುವ ವಿಚಾರದಲ್ಲಿ ಒಂದು ಮಹತ್ವದ ಚರ್ಚೆ­­ಯನ್ನು  ಪ್ರಾರಂಭಿಸಿದ್ದಾರೆ. ಬದುಕಿನಲ್ಲಿ ಯಾವುದೇ ವೃತ್ತಿಯೂ ಕೀಳು ಎಂದು ಭಾವಿಸ­ಬಾರದು. ಏಕೆಂದರೆ ಮಾನವ ಸಮಾಜದಲ್ಲಿ ಅನೇಕ ವೃತ್ತಿಗಳು ಜನರ ಬೇಡಿಕೆಗಳಿಂದಲೇ ಉದ್ಭವಿಸಿವೆ.

ಜಗತ್ತಿನ ಇತಿಹಾಸವನ್ನು ಗಮನಿಸಿದಾಗ ಹಲ­ವಾರು ಆಶ್ಚರ್ಯಕರ, ಕೌತುಕಮಯ ಮತ್ತು ಅನ­ಪೇಕ್ಷಿತ ಘಟನೆಗಳು ನಡೆದಿರುವುದು ಕಂಡು­ಬರುತ್ತವೆ. ದೇಶದೊಳಗೆ ಹಾಗೂ ವಿದೇಶಗಳಲ್ಲಿ ಯುದ್ಧಗಳು ನಡೆಯುವಾಗ ಯೋಧರು ವರ್ಷಾ­ನುಗಟ್ಟಲೆ ತಮ್ಮ ಮನೆ–ಮಾರು ಬಿಟ್ಟು ದೇಶದ ಭದ್ರತೆಯನ್ನು ಕಾಪಾಡುವುದಕ್ಕಾಗಿ ಜೀವದ ಭಯವಿಲ್ಲದೆ ಕಾದಾಡಬೇಕಾದ ಅನೇಕ ಪ್ರಸಂಗ­ಗಳು ಬರುತ್ತವೆ.

ವಿವಾಹಿತರಾಗಲಿ, ಅವಿವಾಹಿತ­ರಾಗಲಿ, ವರ್ಷಾನುಗಟ್ಟಲೆ ಮನೆಯಿಂದ ದೂರ­ವಿದ್ದಾಗ ಅವರಲ್ಲಿ ಜೀವನದ ಬಗ್ಗೆಯೇ ಜುಗುಪ್ಸೆ ಹುಟ್ಟುವುದು ಸಹಜ. ಎಷ್ಟೋ ಸಂದರ್ಭಗಳಲ್ಲಿ ಕೆಲವು ಯೋಧರು ಆತ್ಮಹತ್ಯೆಯನ್ನೂ ಮಾಡಿ­ಕೊಂಡ ಘಟನೆಗಳು ದಾಖಲಾಗಿವೆ. ಇಂಥ ಅನೇಕ ಸಂದರ್ಭಗಳಲ್ಲಿ ಆಯಾ ಪ್ರದೇಶದಲ್ಲಿ ಸಮಾಜದ ಒಂದು ವರ್ಗದ ಮಹಿಳೆಯರು ಯೋಧರಿಗೆ ಆಸರೆಯಾಗಿದ್ದಾರೆ. ಅವರನ್ನು ಸಂತೈಸಿದ್ದಾರೆ. ಅವರ ಬದುಕಿನಲ್ಲಿ ನೆಮ್ಮದಿ ತಂದಿದ್ದಾರೆ. ದೈಹಿಕ ಸಂಪರ್ಕ ಕೆಲವೊಮ್ಮೆ ಅವರ ಮಧ್ಯೆ ಮದುವೆಗೂ ದಾರಿಮಾಡಿಕೊಟ್ಟಿದೆ.

ಇಂತಹ ಮಹಿಳಾ ಸಮುದಾಯವನ್ನು ವೇಶ್ಯೆ­ಯರು ಎಂದು ಕ್ಷುಲ್ಲಕವಾಗಿ ಪರಿಗಣಿಸಬಹುದೇ? ಅವರು ಗಂಡಸರ ಜತೆಗೆ ಸಮಯ ಕಳೆದದ್ದಕ್ಕಾಗಿ ಅವರನ್ನು ದೈಹಿಕವಾಗಿ ತೃಪ್ತಿಪಡಿಸಿದ್ದಕ್ಕಾಗಿ ಸಂಭಾವನೆಯನ್ನು ಪಡೆದಿರಬಹುದು. ಆದರೆ ಅವರ ವೃತ್ತಿ ಕೂಡ ಒಂದು ಸೇವೆ ಎಂದು ಪರಿಗಣಿಸುವುದು ಅರ್ಥಪೂರ್ಣವಲ್ಲವೆ?

ಅಮೆರಿಕದ ಇತಿಹಾಸ ತುಂಬ ಸಾಹಸ­ಮಯ­ವಾಗಿದೆ. ಪ್ರಖ್ಯಾತ ಲೇಖಕ ಜಾಕ್ ಲಂಡನ್ ಕೆಲವು ಕತೆಗಳಲ್ಲಿ ಸ್ವಂತ ಜೀವನದ ಸಾಹಸ­ಗಳನ್ನು ವರ್ಣಿಸಿದ್ದಾನೆ. ಅವನ ಬಾಲ್ಯ ತುಂಬ ನೋವಿ­ನಿಂದ ಕೂಡಿತ್ತು. ಅವ­ನಿಗೆ ಹಣದ ಅಭಾ­ವ­ವಿದ್ದಾಗ ಉದ್ಯೋಗ ಅವಕಾಶಗಳು ಇಲ್ಲದಿ­­ದ್ದಾಗ ಕಲ್ಲಿದ್ದಲು ಗಣಿ­ಗಳಲ್ಲಿ ಕೆಲಸ ಮಾಡು­ತ್ತಾನೆ ಹಾಗೂ ಸಮುದ್ರದಲ್ಲಿ ಅಹೋ­ರಾತ್ರಿ ಮುತ್ತುಗಳನ್ನು ಹುಡುಕಿಕೊಂಡು ಹೋಗು­ತ್ತಾನೆ. ತಮ್ಮ ಜೀವನವನ್ನೇ  ಒತ್ತೆ ಇಡಬೇಕಾಗುವ ಸಂದ­ರ್ಭಗಳನ್ನು ವರ್ಣಿಸುತ್ತಾನೆ.

ಇಂತಹ ಸಂದರ್ಭ­ದಲ್ಲಿ ಸಮಾಜದ ಒಂದು ವರ್ಗದ ಕೆಲ ಯುವತಿ­ಯರು, ಈ ರೀತಿ ಕಷ್ಟದಲ್ಲಿ ದುಡಿಯುತ್ತಿದ್ದ ಯುವ­ಕರಿಗೆ ಯಾವ ರೀತಿ ಆಸರೆಯಾಗಿದ್ದಾರೆ ಎನ್ನುವುದನ್ನು ಕೃತಜ್ಞತೆ­ಯಿಂದ ನೆನೆಸಿ­ಕೊಂಡಿ­ದ್ದಾನೆ. ಎಷ್ಟೋ ಸಲ ಅಂತಹ ಯುವತಿಯರು ತಮ್ಮ ಪ್ರಾಣ ಕಳೆದುಕೊಂಡಿದ್ದನ್ನು ಸ್ಮರಿಸುತ್ತಾನೆ. ಸೊಕ್ಕಿನಿಂದ ಮೆರೆಯುವ ಅಮೆರಿಕದ ಶ್ರೀಮಂತ ವರ್ಗದ ಯುವತಿಯರಿಗೆ ಹೋಲಿಸಿ­ದರೆ ಯಾವ ಆಮಿಷವೂ ಇಲ್ಲದೆ ಸಂಪೂರ್ಣ­ವಾಗಿ ತಮ್ಮನ್ನು ಅರ್ಪಿಸಿಕೊಂಡ ಬಡ ಯುವತಿ­ಯರು ಎಷ್ಟು ಉತ್ತ­ಮರು ಎಂದು ಪ್ರಸ್ತಾಪಿಸುವ ಜಾಕ್ ಲಂಡನ್ ಚಿಂತನೆ ವೇಶ್ಯಾ ಸಮೂಹದ ಕಡೆಗೆ ಹೊಸ ದೃಷ್ಟಿಕೋನದಿಂದ ನೋಡುವ ಹಾಗೆ ಮಾಡುತ್ತದೆ.

ಅಮೆರಿಕದ ಲಾಸ್ ಏಂಜಲೀಸ್ ಸಮೀಪದಲ್ಲಿ ಒಂದು ಸ್ಥಾವರವನ್ನು ಕಟ್ಟುವ ಕೆಲಸದಲ್ಲಿ ನಿರತ­ರಾಗಿದ್ದ ಎಂಜಿನಿಯರುಗಳು ೨೦೦ ವರ್ಷಗಳ ಹಿಂದೆ ಕಟ್ಟಲಾದ ಒಂದು ಮುರಿದು ಬಿದ್ದ ಬಡಾ­ವಣೆಯನ್ನು ೩೦ ವರ್ಷಗಳ ಹಿಂದೆ ಶೋಧಿ­ಸಿದರು. ಕಟ್ಟಿಗೆ ಮತ್ತು ಕಲ್ಲುಗಳಿಂದ ಕಟ್ಟಿದ ಹಳೆ ವಿನ್ಯಾಸದ ಮನೆಗಳು ಅಲ್ಲಿ ದೊರೆತವು. ಅದನ್ನು ಅಲ್ಲಿಯ ಪ್ರಾಚ್ಯ ವಸ್ತುಗಳ ತಜ್ಞರು ಅಧ್ಯಯನ ಮಾಡಿದರು. ಅಲ್ಲಿ ಅವರಿಗೆ ಕೆಲವು ಕೌತುಕ­ಮಯ ವಸ್ತುಗಳು ದೊರೆತವು. ಅವುಗಳನ್ನು ಅಲ್ಲಿಯ ಸಮಾಜಶಾಸ್ತ್ರಜ್ಞರು ಮತ್ತು ಇತಿ­ಹಾ­ಸ­ಕಾರರು ಪರೀಕ್ಷಿಸಿ ಇಲ್ಲಿ ವೇಶ್ಯೆಯರ ಸಮು­ದಾಯ ನೆಲೆಸಿತ್ತು ಎಂದು ಗುರುತಿಸಿದ್ದಾರೆ.

ಇಲ್ಲಿ ವೇಶ್ಯೆಯರ  ಸಮುದಾಯವಿರಲು ಕಾರ­ಣ­ವೆಂದರೆ, ಆ ಪ್ರದೇಶದಲ್ಲಿ, ಅಂದರೆ, ಲಾಸ್ ಏಂಜ­ಲೀಸ್, ಸ್ಯಾನ್‌ಫ್ರಾನ್ಸಿಸ್ಕೊ ಸುತ್ತಲೂ 200 ವರ್ಷಗಳ ಹಿಂದೆ ಚೀನಾ ಹಾಗೂ ಏಷ್ಯಾ ಖಂಡದ ಇತರ ಜನರು  ರಹದಾರಿಗಳನ್ನು ನಿರ್ಮಿ­ಸಲು,  ಭೂಮಿ ತೋಡಲು, ಕಾಲುವೆ­ಯನ್ನು ಕೊರೆ­ಯಲು ಬಂದು ನೆಲೆಸಿ­ದ್ದರು. ಈ ಕಾರ್ಮಿಕರು ಬಂದು ನೆಲೆಸಿದಾಗ ಅವರ ಜತೆ ಸಂಗಾತಿ­ಗಳಿರ­ಲಿಲ್ಲ. ಅವರಿಗೆ ಊಟ, ತಿಂಡಿ, ಮನ­ರಂಜನೆ ಒದಗಿ­ಸಲು ಒಂದು ವರ್ಗದ ಸ್ತ್ರೀಯರು ಬಂದು ಅಲ್ಲಿ ನೆಲೆಸಿದ್ದರು. ಕ್ರಮೇಣ ಎಷ್ಟೋ ಮಹಿಳೆ­ಯರು ಸೇವೆ ಸಲ್ಲಿಸುತ್ತ ಕಾರ್ಮಿ­ಕರ ಕಷ್ಟ-, ನಷ್ಟಗಳನ್ನು ಅರಿತು ಅನುಭವಿಸಿ ಅವರ ಜತೆ ಸೇರಿ ಸಂಸಾರ ಹೂಡಿದರು. ಅವರ ಮೊಮ್ಮ­ಕ್ಕಳು, ಮರಿ-ಮಕ್ಕಳು ಇವತ್ತು ಅಮೆರಿಕದ ಜನ­ಸಮೂಹದಲ್ಲಿ ವಿಲೀನ­ರಾಗಿ ಹೋಗಿದ್ದಾರೆ.

ವೇಶ್ಯಾವಾಟಿಕೆ ಎಂದರೆ ತುಚ್ಛ ಭಾವನೆ ಬರುವ ಹಾಗೆ ಸಮಾಜ ವರ್ತಿಸುತ್ತದೆ. ವೇಶ್ಯೆ­ಯರ ಜೀವನ­ವನ್ನು ಕೂಲಂಕಷವಾಗಿ ನೋಡುವ ಅವಶ್ಯಕತೆ ಇದೆ. ನಾನು ೨೦ ವರ್ಷಗಳ ಹಿಂದೆ ‘ಏಡ್ಸ್‌’ ವಿಷಯದ ಮೇಲೆ ಒಂದು ಕಿರು ಚಿತ್ರ ಮಾಡಿದ್ದೆ. ಆ ಸಮಯದಲ್ಲಿ ಮುಂಬೈನ ಒಂದು ಆಸ್ಪತ್ರೆಯಲ್ಲಿ ಎಚ್‌ಐವಿ ಸೋಂಕು ತಗುಲಿದವ­ರನ್ನು ಭೇಟಿಯಾಗಿದ್ದೆ. ಗ್ರಾಂಟ್ ರೋಡ್‌ನ ಸಮೀಪದಲ್ಲಿರುವ ಕಾಮಾಟಿಪುರದಲ್ಲಿ ವಾಸಿ­ಸುವ ವೇಶ್ಯೆಯರಲ್ಲಿ ಕೆಲವರ ಮನೆಗಳಿಗೆ ಭೇಟಿ ಕೊಟ್ಟು ಅವರ ಬದುಕಿನ ಕ್ರಮ ಮತ್ತು ಸಮಸ್ಯೆ­ಗಳನ್ನು ಕುರಿತು ಚರ್ಚಿಸಿದ್ದೇನೆ.

ಎಷ್ಟೋ ವೇಶ್ಯೆ­ಯರಿಗೆ ಯಾಕೆ ಅಲ್ಲಿಗೆ ಬಂದಿದ್ದೇವೆ, ಏನು ಮಾಡು­ತ್ತಿದ್ದೇವೆ,   ಭವಿಷ್ಯವೇನು ಎನ್ನುವ ಕಲ್ಪ­ನೆಯೇ ಇಲ್ಲ. ಅಂತಹ ಮುಗ್ಧರು. ಅವರು ಕಡು ಬಡತನದ ಹಿನ್ನೆಲೆಯಿಂದ ಬಂದವರು. ಹೊಟ್ಟೆಗೆ ನೀರು, ಅನ್ನ, ಆಸರೆ ಕೊಡಲಾಗದೆ ತಂದೆ ತಾಯಂದಿರಿಂದ ಮಾರಾಟವಾದ ಈ ಮುಗ್ಧ ಹೆಂಗಳೆಯರು ವೇಶ್ಯೆಯರಾಗಿ ಬದುಕುತ್ತಿರು­ವು­ದನ್ನು ನೋಡಿದಾಗ ಕರುಳು ಹಿಂಡಿದ ಹಾಗೆ ಆಗು­ತ್ತದೆ. ಇದಕ್ಕೆಲ್ಲ ಸಮಾಜದಲ್ಲಿರುವ ಅಸಮಾನ­ತೆಯೇ ಕಾರಣ ಎನ್ನುವುದು ನನಗೆ ಅರಿವಾಯಿತು.

ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸು­ವುದು ಆ ವೃತ್ತಿಯಲ್ಲಿ ತೊಡಗಿದವರಿಗೂ ಹಾಗೂ ಅವರ ವೃತ್ತಿಗೆ ಕಾರಣವಾದ ಸಮಾ­ಜಕ್ಕೂ ಒಳ್ಳೆಯದು. ಸಮಾಜದಲ್ಲಿ ಎಷ್ಟೋ ಗಂಡಸರಿಗೆ ಮದುವೆ ಮಾಡಿಕೊಳ್ಳಲು ಮನಸ್ಸಿ­ರು­ವುದಿಲ್ಲ. ಅನೇಕ ಒತ್ತಡಗಳಿಂದ ಮದುವೆ ಮಾಡಿ­ಕೊಳ್ಳ­ಬೇಕಾ­ಗುತ್ತದೆ. ಮುಂದೆ ಇಂತಹ ಸಂಸಾರಗಳು ಮುರಿದುಬೀಳುತ್ತವೆ. ಅಷ್ಟೇ ಅಲ್ಲದೆ ವೇಶ್ಯಾವೃತ್ತಿ­ಯನ್ನು ಕಾನೂನುಬದ್ಧ­ಗೊಳಿ­ಸಿದರೆ, ಮದುವೆ ಮಾಡಿ­ಕೊಳ್ಳುವ ಆಸೆ ಇಲ್ಲದ ಸಾವಿರಾರು ಗಂಡಸರು ಸಂಸಾರ ಹೂಡುವ ಅವಶ್ಯಕತೆ ಇರುವುದಿಲ್ಲ. ಮನೆ ಕಟ್ಟುವ, ಸಂಸಾರ ಸಾಗಿಸುವ, ಮಕ್ಕಳನ್ನು ಬೆಳೆಸುವ ಜಂಜಾಟಕ್ಕೆ ಬೀಳಬೇಕಾಗಿಲ್ಲ.

ಹೆಂಡತಿ ಮಕ್ಕಳಿಗಾಗಿ ಹಣ ಕೂಡಿಸಿ ಇಡು­ವುದು, ಆಸ್ತಿ ಮಾಡುವುದು ಮತ್ತು ಇಂತಹ ಕೆಲಸಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗುವುದು ಇವೆಲ್ಲವೂ ಕಡಿಮೆಯಾಗುವ ಸಂಭವವಿದೆ. ಅಂದರೆ ವೇಶ್ಯಾವೃತ್ತಿಯನ್ನು ಬರೀ ಲೈಂಗಿಕ ದೃಷ್ಟಿ­ಕೋನದಿಂದ ಮಾತ್ರ ನೋಡಬೇಕಿಲ್ಲ. ಸಮಾಜದ ಕೆಲವು ಸಮಸ್ಯೆಗಳ ನಿವಾರಣೆಗೆ, ಅಮಾಯಕ ಹೆಂಗಳೆಯರ ಮೇಲಿನ ದೌರ್ಜನ್ಯವನ್ನು ಕಡಿಮೆ ಮಾಡುವಲ್ಲಿ ಮತ್ತು ಮುಖ್ಯವಾಗಿ ಏರುತ್ತಿರುವ ಜನಸಂಖ್ಯೆಯ ನಿಯಂತ್ರಣದಲ್ಲಿ ವೇಶ್ಯಾವೃತ್ತಿಯ ಪಾತ್ರವನ್ನು ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಪರಿಗಣಿಸುವುದು ಅವಶ್ಯವಾಗಿದೆ.

ಇಲ್ಲಿ ಒಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ. - ಜಪಾನ್ ದೇಶದ ಟೋಕಿಯೊ ಮಹಾ­ನಗರದಲ್ಲಿ ಜನಸಂಖ್ಯೆ ಅತಿಯಾಗಿದ್ದು ಅಲ್ಲಿ ಮನೆ ಬಾಡಿಗೆಗೆ ಸಿಗುವುದು ದುರ್ಲಭ. ಕಾರ್ಖಾನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಕೆಲಸ ಮಾಡುವ ಸಾವಿರಾರು ಯುವಕರು ಒಂದೇ ಕೋಣೆ  ಇರುವ  ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಾರೆ. ಅವರು ತಮ್ಮ ಮಾನಸಿಕ ಮತ್ತು ದೈಹಿಕ ಮನರಂಜನೆಗಾಗಿ, ವಿಶ್ರಾಂತಿಗಾಗಿ ಕೆಲವೊಂದು ಹೋಟೆಲ್‌ಗಳಿಗೆ ಹೋಗುತ್ತಾರೆ.

ಅಲ್ಲಿ ಅವರಿಗೆ ಸಂಗಾತಿಗಳಾಗಿ ‘ಗೀಷ’ (ಗಂಡಸ­ರಿಗೆ ಸೇವೆ ಸಲ್ಲಿಸುವ ಸ್ತ್ರೀಯರು) ಜತೆ  ನೀಡು­ತ್ತಾರೆ. ಇಂತಹ ಎಷ್ಟೋ ಯುವಕರು ತಮಗೆ ಸಂಸಾರ ಬೇಡವೆಂದು ಹೇಳುತ್ತಾರೆ. ನಮಗೆ ಜೀವನದಲ್ಲಿ ತೃಪ್ತಿ ಇದೆ, ಇರುವವರೆಗೆ ಹುರುಪಿ­ನಿಂದ ಕೆಲಸ ಮಾಡುತ್ತೇವೆ, ನೆಮ್ಮದಿಯಿಂದ ಸುಖವಾಗಿ ಬದುಕು­ತ್ತೇವೆನ್ನುತ್ತಾರೆ. ೧೨೦ ಕೋಟಿ ಜನರಿಂದ ತುಂಬಿದ ಭಾರತ ಹೊಸ ಸಮಾಜ ರೂಪಿಸುವ  ಕಡೆಗೆ ದೃಷ್ಟಿ ಹೊರಳಿಸ­ಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT